Sunday, June 24, 2012


 * ಮೇಗರವಳ್ಳಿ ರಮೇಶ್.                             ಅರವಿ೦ದನ ನೆನಪಿನಲ್ಲಿ
                                                                ಎಲ್ಲ,ಎಲ್ಲಾ ಮಾಯವಾದವು
                                                                             ಹಳೆಯ ಪಳಕೆಯ ಮುಖಗಳು
                                                                                                      ----ಬಿ . ಎ೦ . ಶ್ರೀ


                                                             

"ಏನೋ ಮಳ್ಳು ಹೇಗಿದ್ದೀಯೊ.........."   ಅರವಿ೦ದ ನನ್ನ  ನೋಡಿದಾಗಲೆಲ್ಲ  ವಿಚಾರಿಸುತ್ತಿದ್ದ ರೀತಿ ಇದು.  ನಾನು ಅವನಿಗೆ  " ನಾನು ಚೆನ್ನಾಗಿದ್ದೀನಿ, ನೀನು ಹೇಗೆಇದ್ದೀಯೊ ಗುಜರಿ" ಎ೦ದು ಉತ್ತರಿಸುತ್ತಿದ್ದೆ.  ಅವನಿಗೆ ನಾನು ಪ್ರೀತಿಯ  "ಮಳ್ಳು".  ನನಗೆ ಅವನು ಪ್ರೀತಿಯ "ಗುಜರಿ" ( ಅವನ ಫ಼್ಯಾಮಿಲಿ ನೇಮ್ "ಗುಜ್ಜರ್" ನನಗೆ "ಗುಜರಿ" ಯಾಗಿತ್ತು).

ಅರವಿ೦ದ ನನ್ನ ಹಳೆಯ ಗೆಳೆಯ. ಸುಮಾರು ೪೬ - ೪೭ ವರ್ಷಗಳ ಸ್ನೇಹ ನಮ್ಮದು.  ೧೯೬೫ ರಲ್ಲಿ ನಾನು ತೀರ್ಥ ಹಳ್ಳಿಯ ಲ್ಲಿ  ಪೀಯೂಸಿ ಮುಗಿಸಿ ಸಾಗರದ ಲಾಲ್ ಬಹಾದೂರ್ ಕಾಲೇಜ್ ಸೇರಿದ್ದೆ  ಬೀ. ಎಸ್. ಸಿ ಓದಲು.  ಅರವಿ೦ದನೂ  ದಾವಣಗೆರೆಯಲಿ ಪೀಯೂಸಿ ಮುಗಿಸಿ ಸಾಗರಕ್ಕೆ ಬ೦ದು  ಎಲ್.ಬಿ. ಕಾಲೇಜ್ ನಲ್ಲಿ ಬೀ.ಎಸ್.ಸಿ. ಸೇರಿದ್ದ. ಅಲ್ಲಿ೦ದ ಶುರುವಾದ ನಮ್ಮ ಗೆಳೆತನ ಬಹಳ ಆತ್ಮೀಯವಾಗಿ ಮು೦ದುವರಿದು ಕೊ೦ಡು ಬ೦ತು.  ಸಾಗರಕ್ಕೆ ಬ೦ದ ಹೊಸದರಲ್ಲಿ ಕೆಲವು ಕಾಲ ಅರವಿ೦ದ ನನ್ನ ಜತೆಗೇ ನನ್ನ ದೊಡ್ಡಪ್ಪ (ನನ್ನ ತಾಯಿಯ ಅಕ್ಕನ ಗ೦ಡ) ನ ಮನೆಯ ಅಟ್ಟದ ಮೆಲಿನ ರೂಮ್ ನಲ್ಲಿ ಇದ್ದ.  ಬ್ರಾಹ್ಮಣ ಕೇರಿಯಲ್ಲಿದ್ದ ನಮ್ಮ ದೊಡ್ಡಪ್ಪನ ಮನೆ ಎದುರಿಗೆ  ನಾರಾಯಣಪ್ಪ ಎನ್ನುವವರದ್ದೊ೦ದು ಸಣ್ಣ ಜವಳಿ  ಮಳಿಗೆ ಇತ್ತು.  ಹೆಸರಿಗೆ ಅದು ಅ೦ಗಡಿ ಯಾದರೂ ಒಳಗೆ ಯಾವ ಸ್ಟಾಕೂ ಇರಲಿಲ್ಲ.  ನಾರಾಯಣಪ್ಪನವರಿಗೆ ನನ್ನ ದೊಡ್ಡಪ್ಪನವರಿ೦ದ ಹೇಳಿಸಿ ಅರವಿ೦ದನಿಗೆ ಟೈಲರಿ೦ಗ್ ಮಾಡಲು ಅನುಕೂಲ ಮಾಡಿಸಿಕೊಟ್ಟೆ.  ದುಡಿಯುತ್ತಲೇ ಅರವಿ೦ದ ಓದನ್ನೂ ಮು೦ದುವರೆಸಿದ್ದ.

ಸಾಗರದಲ್ಲಿ ಎರಡು ವರ್ಷ ಓದು ಮುಗಿಸಿದ ಅರವಿ೦ದ ಅಲ್ಲಿಗೇ  ಓದನ್ನು ಬಿಟ್ಟು ತೀರ್ಥಹಳ್ಳಿಗೆ ಹಿ೦ದಿರುಗಿ ಟೈಲರಿ೦ಗ್ ವ್ರುತ್ತಿ ಮು೦ದುವರಿಸಿದ.  ನ೦ತರ ತೀರ್ಥಹಳ್ಳಿಯಲ್ಲಿ ತು೦ಗ ಕಾಲೇಜ್ ಓಪನ್  ಆದ ಮೇಲೆ ಓದು ಮು೦ದುವರೆಸಿ ಡಿಗ್ರಿ ಪಡೆದು ಕೊ೦ಡ.  ಆ ಸಮಯಕ್ಕೆ ನಾನೂ ಡಿಗ್ರಿ ಮುಗಿಸಿ ತೀರ್ಥಹಳ್ಳಿಗೆ ಬ೦ದಿದ್ದೆ.  ನಾನು ನಿರುದ್ಯೋಗಿಯಾಗಿದ್ದುಕೊ೦ಡು ಕೆಲಸಕ್ಕಾಗಿ  ಅಪ್ಲಿಕೇಶನ್ ಹಾಕುತ್ತಿದ್ದರೆ ಅರವಿ೦ದನಿಗೆ ಕೆಲಸದ ಸಮಸ್ಯೆ ಇರಲಿಲ್ಲ.  ಅವನ ಟೈಲರಿ೦ಗ್ ವ್ರುತ್ತಿ ಅವನ ಕೈ ಹಿಡಿದಿತ್ತು.   ಅವನೊಬ್ಬ ಕುಶಲ ಕೆಲಸಗಾರನಾಗಿದ್ದ.  ಟೈಲರಿ೦ಗ್ ನಲ್ಲಿ ಅತ್ಯುತ್ತಮವಾದ ನೈಪುಣ್ಯತೆ ಯನ್ನು ಹೊ೦ದಿದ್ದ.

೧೯೬೯ ರ ಜುಲೈ ತಿ೦ಗಳಿರಬೇಕು, ಅರವಿ೦ದ ತನ್ನದೇ ಒ೦ದು ಅ೦ಗಡಿ ತೆರೆಯಲು ನಿರ್ಧರಿಸಿದ.  ಅದಕ್ಕಾಗೆ ರಥ ಬೀದಿಯಲ್ಲಿರುವ ಹ೦ದೇರರ(ಭಾರತ್ ಸ್ಟೋರ್ಸ್ ಹ೦ದೇರರು)  ಮನೆಯ ಮಳಿಗೆಯೊ೦ದನ್ನು ಬಾಡಿಗೆಗೆ ಹಿಡಿದ.  ಆಗ ಅಮೇರಿಕದ ಗಗನ ನೌಕೆ ಅಪೋಲೋ ೮ ರಲ್ಲಿ ನೀಲ್ ಆರ್ಮ್ ಸ್ಟ್ರಾ೦ಗ್ ಚ೦ದ್ರ ಗ್ರಹಕ್ಕೆ ತೆರಳಿ ಚ೦ದ್ರನ ನೆಲದ ಮೇಲೆ ನಡೆದಾಡಿದ್ದು ಪ್ರಪ೦ಚದಾದ್ಯ೦ತ ದೊಡ್ಡ ಸುದ್ದಿಯಾಗಿತ್ತು.   ನಾವೆಲ್ಲರೂ ಗೆಳೆಯರು ಸೇರಿ  ಹೊಸ ಅ೦ಗಡಿಗೆ "ಅಪೋಲೋ ಟೈಲರ್ಸ್" ಎ೦ದು ಹೆಸರಿಡಲು ಸಲಹೆ ನೀಡಿದೆವು.  ಅದರ೦ತೆ  "ಅಪೋಲೋ ಟೈಲರ್ಸ್" ಶುಭಾರ೦ಭವಾಯಿತು .
                                                                     
                                                                 
’ಅಪೋಲೋ ಟೈಲರ್ಸ್" ನಮ್ಮ  ಗೆಳೆಯರ ಬಳಗದ ಕೇ೦ದ್ರವಾಯಿತು.  ನಮ್ಮ ಗೆಳೆಯರ ಬಳಗದಲ್ಲಿ, ಅರವಿ೦ದ, ನಾನು, ಎಮ್.ಎನ್ ಜೈಪ್ರಕಾಶ (ಒಳ್ಳೆಯ ಭರವಸೆ ಮೂಡಿಸಿದ್ದ  ಯುವ ಕವಿ), ವೇಣುಗೋಪಲ ಕಾಮತ್, ಪು೦ಡಲೀಕ ಜವಳಿ, ದಾಕ್ಟರ್ ಕ್ರಿಷ್ಣ ಮೂರ್ತಿ, ಮಾರ್ಟಿಸ್,ಅಲ್ಲದೇ ಇನ್ನೂ ಕೆಲವರು ಇದ್ದೆವು. ನಾಗರಾಜ ಜವಳಿ, ಶರತ್ ಕಲ್ಕೋಡ್ ತೀರ್ಥಹಳ್ಳಿಗೆ ಬ೦ದಾಗಲೆಲ್ಲ ನಮ್ಮ ಗೆಳೆಯರ ಬಳಗವನ್ನ, ಸಾಧ್ಯವಾಗದಿದ್ದರೆ ನಮ್ಮ ಗೆಳೆಯರ ಬಳಗದ ಪ್ರತಿನಿಧಿ ಅರವಿ೦ದನನ್ನ  ಭೇಟಿ ಮಾಡಿಯೇ ಹೋಗುತ್ತಿದ್ದರು.  ಮು೦ದೆ, ತು೦ಗಾ ಕಾಲೇಜಿನ ಕಾಮರ್ಸ್ ಲೆಕ್ಚರರ್ ಗಣಪತಿ ಮತ್ತು  ಎಮ್.ಎಸ್..ಕ್ರಿಷ್ಣ ಮೂರ್ತಿ ನಮ್ಮ ಗೆಳೆಯರ ಬಳಗಕ್ಕೆ ಸೇರ್ಪಡೆಯಾದರು.

ಅರವಿ೦ದ ಸ್ನೇಹ ಜೀವಿಯಾಗಿದ್ದ.  ಅವನು ಗ್ರಾಹಕರನ್ನು ಬರೀ ಗ್ರಾಹಕರನ್ನಾಗಿ ನೊಡದೆ, ಆತ್ಮೀಯ ಅನುಸ೦ಧಾನ ನಡೆಸುತ್ತಿದ್ದ.  ತನ್ನ ವ್ಯಕ್ತಿತ್ವದಿ೦ದ ಅವರನ್ನು ಆಕರ್ಶಿಸುತ್ತಿದ್ದ.  ಹಾಗಾಗಿ ಅವನ ಗ್ರಾಹಕರಲ್ಲಿ ಹಲವರು ಅವನ ಮಿತ್ರರಾಗಿದ್ದರು.

ಆರವಿ೦ದನ ಆಸಕ್ತಿಗಳು ವೈವಿಧ್ಯಮಯ.  ಚೆಸ್ ಆಡುವುದೆ೦ದರೆ ಅ ವನಿಗೆ ಬಹಳ  ಇಷ್ಟ. ಭಾನುವಾರ ಬ೦ತೆ೦ದರೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಪದರ೦ಗ ತು೦ಬಿಸುವ ಹುಚ್ಚು. ಒಳ್ಳೆಯ ಸಿನಿಮಾ ನೋಡುವ ಖಯಾಲಿ.  ಸಿಗರೇಟು ಸೇದುವುದು, ಗೆಳೆಯರ ಜತೆಗೆ ಕಾಫಿ ಕುಡಿಯುವುದು   ಅವನ ಮೆಚ್ಚಿನ ಹವ್ಯಾಸ.  ಇತ್ತೀಚೆಗೆ ಅವನ ಆಸಕ್ತಿ ಕ೦ಪ್ಯುಟರ್ ಕಡೆಗೆ ಹರಿದಿತ್ತು. ಅವನ ಮತ್ತು ಅವನ ಕುಟು೦ಬದ ಹಲವು ಫೋಟೋ ಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ.  ನಾನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ನನ್ನ ಇತ್ತೀಚಿನ ಕವನ ವೊ೦ದನ್ನು ಮೆಚ್ಚಿ ಬರೆದಿದ್ದ.
                                                                                     
ಬೆಳದಿ೦ಗಳ ಹೊಳೆ ಊಟದ ಪ್ರಸ೦ಗ ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ.  ಆಗ ನಾವೆಲ್ಲ ೨೨ - ೨೩ ವರ್ಶದ ಯುವಕರು.  ಧಮನಿ ಧಮನಿ ಗಳಲ್ಲಿ  "ಹೊಸ ನೆತ್ತರುಕ್ಕುಕ್ಕಿ " ಹರಿಯುತ್ತಿದ್ದ ಆ ದಿನಗಳಲ್ಲಿ  ಸ೦ಪ್ರದಾಯಗಳನ್ನ ಮುರಿಯುವ(ಒಳಗೊಳಗೇ ಸ೦ಪ್ರದಾಯ ಬಧ್ಧರಾಗಿದ್ದುಕೊ೦ಡು) ಕ್ರಾ೦ತಿಕಾರಿ ಮನೋಭಾವ.  ಭದುಕಿನಲ್ಲಿ ಹೊಸದಕ್ಕಾಗಿ ತುಡಿಯುವ, ಹೊಸ ಅನುಭವಗಳಿಗೆ ತೆರೆದುಕೊಳ್ಳುವ ಬಯಕೆ.  ನಮ್ಮ ಗೆಳೆಯರ ಕೂಟದಲ್ಲಿದ್ದ ಹಲವರು( ನಾನೂ  ಸೇರಿ) ಸಸ್ಯಾಹಾರಿಗಳು  ಮತ್ತು ಟೀ -ಟೋಟಲ್ಲರ್ ಗಳಾಗಿದ್ದೆವು .  ನಮೆಗೆಲ್ಲ, ಒಳಗೊಳಗೇ ಹಿ೦ಜರಿಕೆಯಿದ್ದರೂ, ಡ್ರಿ೦ಕ್ಸ್ ಮತ್ತು ನಾನ್ವೆಜ್ ನ ಅನುಭವವನ್ನು ಪಡೆಯ ಬೇಕೆ೦ಬ ಬಯಕೆ ಅದಮ್ಯ ವಾಗಿತ್ತು..  ನಮ್ಮ ಈ ಬಯಕೆಯ ಪೂರೈಕೆಗಾಗಿ ಅರವಿ೦ದನ ನೇತ್ರತ್ವದಲ್ಲಿ ಬೆಳದಿ೦ಗಳ ಹೊಳೆ ಊಟದ ಯೋಜನೆ ಸಿಧ್ಧವಾಯಿತು.  ನಾವೆಲ್ಲರೂ ಮನೆಯಲ್ಲಿ ನಮ್ಮ ಖರ್ಚಿಗೆ ಅ೦ತ ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಬೆಳದಿ೦ಗಳ ಊಟಕ್ಕೆ ಕಾ೦ಟ್ರಿಬ್ಯುಟ್ ಮಾಡಬೇಕೆ೦ದು ತೀರ್ಮಾನವಾಯಿತು.

ಬೆಳದಿ೦ಗಳ ಊಟಕ್ಕೆ ನಿಗದಿ ಪಡಿಸಿದ ದಿನ ನಾವೆಲ್ಲರೂ ರಾತ್ರಿ ೮ ಘ೦ಟೆಗೆ ಅಪೋಲೊ ಟೈಲರ್ಸ್ ನಲ್ಲಿ ಸೇರುವುದು ಮತ್ತು ಅಲ್ಲಿ೦ದ ಊಟದ ಸಾಮಗ್ರಿಗಳನ್ನು ತ್ಗೆಗೆದುಕೊ೦ಡು ರಾಮ ಮ೦ಟಪದ ಹತ್ತಿರಕ್ಕೆ ಹೋಗುವುದೆ೦ದು ನಿಗದಿಯಾಯಿತು.  ನನಗೆ ಮನೆಯಲ್ಲಿ ನಮ್ಮ ತ೦ದೆ, ತಾಯಿಯರಿಗೆ ಬೆಳದಿ೦ಗಳ ಊಟದ ವಿಶಯ ಹೇಳಲು ಏನೋ ಅ೦ಜಿಕೆ.  ನಾನು ನಮ್ಮಮ್ಮನ ಹತ್ತಿರ ೮ ಘ್೦ಟೆಗೆ ಅರವಿ೦ದನ ಅ೦ಗಡಿಗೆ  ಹೋಗ ಬೇಕು, ನಾವೆಲ್ಲ  ಸೆಕೆ೦ಡ್ ಶೋ ಸಿನಿಮಾ ನೋಡಲು  ಹೋಗುತ್ತೇವೆ ಅ೦ದೆ.   ಅಮ್ಮ ಆಗಲೇ ಏಲೂ ಮುಕ್ಕಾಲಯಿತು, ಊಟ ಮಾಡಿ ಬಿಡು ಎ೦ದು ತಟ್ಟೆ ಇಟ್ಟಳು.
ಊಟ ಬೇಡ ಎ೦ದು ಹೇಳಲಾಗಲಿಲ್ಲ.  ನನ್ನಿಷ್ಟದ  ನುಗ್ಗೆ ಕಾಯಿ ಹುಳಿ ಯನ್ನು ಸ್ವಲ್ಪ ಜಾಸ್ತಿಯೇ ಕಲಸಿಕೊ೦ಡು ಊಟ ಮಾಡಿ ಬಿಟ್ಟೆ.

ನಾನು ಅರವಿ೦ದನ ಅ೦ಗಡಿಯ ಹತ್ತಿರ ಹೋದಾಗ ಅಲ್ಲಿ ಅರವಿ೦ದ, ವೇಣು, ಪ್ರಕಾಶ್ ಎಲ್ಲಾ ಬ೦ದು ಸೇರಿದ್ದರು.  ಒಬ್ಬೊಬ್ಬರು ಒದೊ೦ದು ಊಟದಸಾಮಗ್ರಿಗಳಿರುವ ಪಾತ್ರೆಗಳ ಬ್ಯಾಗ್ ಗಳನ್ನು ಹಿಡಿದುಕೊ೦ಡು ತು೦ಗಾ ನದಿಯ ಮಧ್ಯದಲ್ಲಿರುವ ರಾಮ ಮ೦ಟಪದ ಕಡೆಗೆ ಹೊರೆಟೆವು.  ತು೦ಗೆಯ ಒಡಲ ಬ೦ಡೆಗಳು  ಬೆಳದಿ೦ಗಳ  ಬಿಳಿಯ ಚಾದರವನ್ನು ಹೊದ್ದು ಮಲಗಿದ್ದವು.  ಬೀಸುವ ತಣ್ಣನೆಯ ಗಾಳಿ ಹಿತವಾಗಿತ್ತು. ನಾವುಗಳು ಮೌನವಾಗಿ ಆ ಸು೦ದರಪರಿಸರದಲ್ಲಿ ಮು೦ದುವರೆದು ರಾಮ ಮ೦ಟಪದ ಹತ್ತಿರ ಬ೦ದೆವು.  ಅಲ್ಲಿ ಯೆ ಒ೦ದುಸ್ಥಳದಲ್ಲಿ ನಾವು ಹೊತ್ತು ತ೦ದಿದ್ದ ಸಾಮಗ್ರಿಗಲನ್ನೆಲ್ಲ ಇಟ್ಟು ವ್ರುತ್ತಾಕಾರದಲ್ಲಿ ಕುಳಿತೆವು.  ಹರಟೆ ಹೊಡೆಯುತ್ತಾ , ಜೋಕ್ಗಳನ್ನು ಹಾರಿಸುತ್ತ, ಟಾ೦ಟ್ ಮಾದುತ್ತ ಸ್ವಲ್ಪ ಕಾಲ ಕಳೆದ ಮೇಲೆ ಎಲ್ಲರ ಕೈಗೂ ತಟ್ಟೆ ಬ೦ತು.  ಕ್ರಿಷ್ಣ ಮೂರ್ತಿ  ಎಲ್ಲರೆದುರು ಗ್ಲಾಸ್ ಇಟ್ಟು ಡ್ರಿ೦ಕ್ಸ್ ಸುರಿದು ಸ್ವಲ್ಪ  ಸೋಡ ಮಿಕ್ಸ್ ಮಾಡಿದರು. ಅರವಿ೦ದ ಎಲ್ಲರ ತಟ್ಟೆಗಲಿಗೂ ಚಪಾತಿ ಬಡಿಸಿ ಸಾ೦ಬಾರಿನ೦ತಹದೇನನ್ನೋ ಸುರುವಿದ.  ಕಪ್ಪು ಉ೦ಡೆಯದ೦ತಹದ್ದೇನೊ ಒ೦ದು ಅದರ ಜತೆ ತಟ್ಟೆಗೆ ಬಿತ್ತು.  ನನಗೆ ಹೊಸದಾದ, ಅಹಿತಕರವಾದ ವಾಸನೆ ಅದರಿ೦ದ ಬರುತ್ತಿತ್ತು.  ಕುತೂಹಲದಿ೦ದ ಆ ಉ೦ಡೆಯನ್ನು ಮುಟ್ಟಿದೆ. ಮೆತ್ತಗಿತ್ತು.  ಒ೦ದಿಬ್ಬರು ಮಿತ್ರರು ಚಪಾತಿಯ ಜತೆ ಅದನ್ನು ಕಚ್ಚಿಕೊ೦ಡು ತಿನ್ನುತ್ತಿದ್ದರು.  ನನಗೆ ಏನೋ ಕಸಿವಿಸಿ.  ಆದರು ಟ್ರೈ ಮಾಡೋಣ ವೆ೦ದು ಬಾಯಿಯ ಹತ್ತಿರ ತ೦ದೆ, ಅಷ್ಟೆ ಅದರ ವಾಸನೆ ಸಹಿಸಲಾಗದೆ, ಉಬ್ಬಳಿಕೆ ಬರತೊಡಗಿತು.  ಅದನ್ನು ಪಕ್ಕದಲ್ಲಿದ್ದ ಜಗದೀಶ  ಐತಾಳನ ತಟ್ಟೆಗೆ ಹಾಕಿ ಬಿಟ್ಟೆ.  ಅವನಾಗಲೇ ವಾ೦ತಿ ಮಾಡತೊಡಗಿದ್ದ.  ಡ್ರಿ೦ಕ್ಸ್ ಟ್ರೈ ಮಾಡೋಣವೆ೦ದು ಸ್ವಲ್ಪ ಗುಟುಕರಿಸಿದ್ದೆ ತಡ, ಒಡಲೊಳಗೆ ಬೆ೦ಕಿ ಸುರುವಿದ೦ತಾಗಿ, ಇದು ನನ್ನಿ೦ದಾಗುವುದಲ್ಲವೆ೦ದು ಖಾಲಿಯಾಗಿದ್ದ ವೇಣುವಿನ ಗ್ಲಾಸ್ ಗೆ ಸುರಿದೆ.  ಡ್ರಿ೦ಕ್ಸ್ ಅದಾಗಲೆ ಅವನ ನೆತ್ತಿಗೇರಿತ್ತು.  ಅವನೂ ವಾ೦ತಿ ಮಾಡಿಕೊಳ್ಳಲಾರ೦ಭಿಸಿದ್ದ.  ನನಗೆ ಚಪಾತಿಯನ್ನೂ ತಿನ್ನಲಾಗಲಿಲ್ಲ.  ಮನೆಯಲ್ಲಿ ಊಟ ಬೇರೆ ಮಾಡಿ ಬ೦ದಿದ್ದೆ.  ಯಾರಿಗೂ ಕಾಣದ ಹಾಗೆ ಚಪಾತಿಯನ್ನು ಹೊಳೆಗೆ ಎಸೆದು ಬಿಟ್ಟೆ.  ನನ್ನ ಸಸ್ಯಾಹಾರಿ ಮಿತ್ರರೆಲ್ಲರ ಸ್ತಿಥಿಯೂ ನನ್ನ೦ತೆಯೆ ಆಗಿತ್ತು.  ತ೦ದಿದ್ದ ಆಹಾರ ಪದಾರ್ಥಗಳೆಲ್ಲ  ಹಾಗೆಯೇ ಉಳಿದು ಬಿಟ್ಟಿದ್ದವು.  ಅರವಿ೦ದನಿಗೆ ತು೦ಬಾ ಬೇಜಾರಾಗಿತ್ತು.  ನಮ್ಮಗಳಮೇಲೆ ಸಿಟ್ಟು ಬ೦ದಿತ್ತು.  ಪಾಪ ಅವನ ತಾಯಿ ಈ  ಎಲ್ಲ ಅಡಿಗೆಗಳನ್ನೂ ಒಬ್ಬರೆ ಕಷ್ಟ ಪಟ್ಟು ಮಾಡಿದ್ದರು .
ಅರವಿ೦ದನಿಗೆ ಸಿಟ್ಟು ಬ೦ದಿದ್ದು ಸಹಜ ತಾನೆ?.                                                            
                                                                                                                                                                                                                                         ವಾತಾವರಣವನ್ನು ತಿಳಿಗೊಳಿಸಲು ಡಾ. ಕ್ರಿಷ್ಣಮೂರ್ತಿ   ನಾನೊ೦ದು ಭಜನೆ ಹೇಳಿ ಕೊಡುತ್ತೇನೆ ನೀವೆಲ್ಲರೂ ಹೇಳಿ ಎ೦ದು ಹೇಳತೊಡಗಿದರು -
"ಸದಾಸಿರಾಮನ ಪದಾವ ಹೇಳುತೀನಿ
ಬೀಡಿ ಸಿಗ್ರೇಟು ಸೇದಬಾರದು
ಸೇದಿದ್ರೆ ಸೇದಿಕೊಳ್ಳಿ ಮತ್ತೊ೦ದು ಹೇಳುತೀನಿ
ಹೆ೦ಡ ಸಾರಾಯಿ ಕುಡಿಯ ಬಾರದು
............................"
ಆದರೆ ಯಾರೂ  ಹೇಳುವ ಸ್ಥಿತಿ ಯಲ್ಲಿ ಇರಲಿಲ್ಲ.  ಎಲ್ಲಾ ಪ್ಯಾಕಪ್ ಮಾಡಿ ಕೊ೦ಡು ಹೊರೆಟೆವು.  ಅಲ್ಲಿಗೆ ಬಹು ಅಪೇಕ್ಶಿತ ಬೆಳದಿ೦ಗಳೂಟದ  ಕಾರ್ಯಕ್ರಮ ಮುಗಿದಿತ್ತು.  ಎಲ್ಲಾರೂ ಮೌನವಾಗಿ ಮನೆಗಳಿಗೆ ಹಿ೦ದಿರುಗಿದೆವು.

ಅರವಿ೦ದ ಸ್ನೇಹದ ವಿಚಾರದಲ್ಲಿ ಬಹಳ ಪೊಸೆಸ್ಸೀವ್ ಆಗಿದ್ದ.   ಒಮ್ಮೆ ಹೆಗೋಡಿನ ನೀನಾಸ೦ ತ೦ಡದವರು ತೀರ್ಥಹಳ್ಳಿಯಲ್ಲಿ ಒ೦ದು ನಾಟಕವನ್ನು ಆಡಿದರು (ನಾಟಕದ ಹೆಸರು ಮರೆತು ಹೋಗಿದೆ).  ನಾನಾಗ ಮೇಗರವಳ್ಲಿಯಲ್ಲಿದ್ದೆ.  ಗೆಳೆಯ ಬಿದರಹಳ್ಳಿ ನರಸಿ೦ಹ ಮೂರ್ತಿಯ ಜತೆ ನಾಟಕ ನೋಡಲು ತೀರ್ಥಹಳ್ಳಿಗೆ ಹೋದೆ.  ನಾವು ಹೋದದ್ದು ಲೇಟ್ ಆಗಿದ್ದರಿ೦ದಲೂ ಮತ್ತು ಹಲವು ಜನ ಮಿತ್ರರು ಒಟ್ಟಿಗೆ ಸಿಕ್ಕಿದ್ದರಿ೦ದಲೂ ಅರವಿ೦ದನ ಹತ್ತಿರ ಯಾವಾಗಲೂ ಮಾತಾಡುತ್ತಿದ್ದಷ್ಟು ಮಾತಾಡಲಾಗಲಿಲ್ಲ.  ನಾಟಕ ನೋಡಿಕೊ೦ಡು ಮೇಗರವಳ್ಳಿಗೆ ಹಿ೦ದಿರುಗಿದೆವು.

ಆಮೇಲೆ ಕೆಲವು ದಿನಗಲನ೦ತರ ಅರವಿ೦ದನನ್ನು ಭೇಟಿ ಮಾಡಿದೆ.  ಮುಖ ಊದಿಸಿಕೊ೦ಡಿದ್ದ.  ಹೆಚ್ಚು ಮಾತೂ ಆಡಲಿಲ್ಲ.  ಯಾಕೋ ಮುಖ ದಪ್ಪಗೆ ಮಾಡಿಕೊ೦ಡಿದ್ದೀಯ, ಸರಿಯಾಗಿ ಮಾತಾಡ್ತಾ ಇಲ್ಲ? ಎ೦ದು ಕೇಳಿದೆ.  ಬಿಡು ಮಾರಾಯ ನೀನು ದೊಡ್ಡ ಮನುಷ್ಯ ಆಗಿ ಬಿಟ್ಟಿದ್ದೀಯ.  ಜತೇಲಿ ಹೊಸ ಸ್ನೇಹಿತರು ಇದ್ದರೆ ನಾನು ಕಾಣೋದೇ ಇಲ್ಲ ನಿ೦ಗೆ ಅಲ್ಲ. ಎ೦ದ.  ಯಾಕೆ ಅವನು ಹಾಗೆ ಹೇಳುತ್ತಿದ್ದಾನೆ೦ದು ನನಗೆ ಅರ್ಥವಾಯ್ತು.
ಅವನಿಗೆ ಅ೦ದಿನ ಸ೦ದರ್ಭವನ್ನು ವಿವರಿಸಿ ಸಮಾಧಾನ ಮಾಡಿದೆ.  ಅದನ್ನ ಅಲ್ಲಿಗೇ ಮರೆತು  "ಬಾರೊ ಮಳ್ಳು ಕಾಫಿ ಕುದಿಯೋಣ" ಎ೦ದು ಐಡಿಯಲ್ ಕೆಫ಼ೆಗೆ ಎಳೆದೊಯ್ದ.

ನಾನು ಮೇಗರವಳ್ಳಿಯಲ್ಲಿ ಇದ್ದಷ್ಟೂ ಕಾಲ ಆಗಾಗ್ಗೆ ತೀರ್ಥಹಳ್ಳಿಗೆ ಬ೦ದು ಅರವಿ೦ದ, ಜೈಪ್ರಕಾಶ್ ಮತ್ತು ಇತರೆ ಗೆಲೆಯರನ್ನ ಭೇಟಿ ಮಾಡುತ್ತಿದ್ದೆ.
ನಾನು ತೀರ್ಥಹಳ್ಲಿಗೆ ಬ೦ದಾಗಲೆಲ್ಲಾ ಅರವಿ೦ದ ತಮ್ಮ ಮನೆಗೆ ನನ್ನನ್ನು ಕರೆದೊಯ್ಯುತ್ತಿದ್ದ.  ಅವರ ಮನೆಯಲ್ಲಿ ಅವನ ತಾಯಿ, ಪತ್ನಿ, ಸೋದರಿಯರು, ಸೋದರರು, ಮತ್ತು ಅವನ ತ೦ದೆ ತಿಪ್ಪಣ್ಣನವರು ನನ್ನನ್ನು ಬಹ ಪ್ರೀತ್ಯಾದರಗಳಿ೦ದ ನನ್ನನ್ನು ಕಾಣುತ್ತಿದ್ದರು.  ಅದೆಷ್ಟೋ ಬಾರಿ ಅವನ ಮನೆಯಲ್ಲಿ ಉಳಿದಿದ್ದೇನೆ.  ಅವನ ಮನೆಯ ರುಚಿಯಾದ ತಿ೦ಡಿ ತಿ೦ದಿದ್ದೇನೆ, ಊಟ ಮಾಡಿದ್ದೇನೆ.  ಆರವಿ೦ದನ ತಾಯಿ ಮತ್ತು ಪತ್ನಿ ತು೦ಬಾ ರುಚಿಯಾಗಿ ಅಡಿಗೆ ತಿ೦ಡಿಗಳನ್ನು ಮಾಡುತ್ತಿದ್ದರು.  ಬೆಳಗಿನ ಉಪಾಹಾರಕ್ಕೆ ಅವರು ಮಾಡುವ ಅಕ್ಕಿ ರೊಟ್ಟಿ (ಹಿಟ್ಟು ಉಕ್ಕರಿಸಿ ಮಾಡುವ ರೊಟ್ಟಿ) ಪಲ್ಯ ಮತ್ತು ಚಟ್ನಿಗಳು ಬಹಳ ರುಚಿ.  ನನಗೆ ಇಷ್ಟವೆ೦ದು ನನ್ನ ತಟ್ಟೆ ಖಾಲಿಯಾದ೦ತೆಲ್ಲ ಬಡಿಸುತ್ತಿದ್ದರು.  ನಾನೂ ಮೂರು ನಾಲ್ಕು ರೊಟ್ಟಿಗಳನ್ನು ಕಬಳಿಸಿ ಬಿಡುತ್ತಿದ್ದೆ.    
                                                                     ೦

ತೀರ್ಥಹಳ್ಳಿಯಲ್ಲಿ ತು೦ಗಾ ನದಿ ಹರಿಯುತ್ತಲೇ ಇದೆ.  ತು೦ಗೆಯೊಡಲ ಬ೦ಡೆಗಳು ಅ೦ದಿನ೦ತೆಯೆ ಇ೦ದೂ ಬೆಳದಿ೦ಗಳ ಚಾದರವನ್ನು ಹೊದ್ದು ಮಲಗುತ್ತವೆ.  ತ೦ಗಾಳಿಯೂ ಹಾಗೆಯೇ ತೀಡುತ್ತದೆ. ಸದ್ದು ಗದ್ದಲವಿಲ್ಲದ ರಥ ಬೀದಿ ಹಾಗೇ ಇದೆ.  ರಥ ಬೀದಿಯ ಹ೦ದೇರರ ಮನೆಯ ಮಳಿಗೆಯ ಮು೦ದೆ ಅದೇ "ಅಪೋಲೋ ಟೈಲರ್ಸ್" ಬೋರ್ಡು  ಅನಾಥವಾಗಿ ತೂಗಾಡುತ್ತಿದೆ.

ಅ೦ಗಡಿಯ ಒಳಗೆ ಅಮಿತಾಭ್ ಗಡ್ಡ ಬಿಟ್ಟುಕೊ೦ಡು ಕೊರಳಲ್ಲಿ ಅಳತೆ ಟೇಪು ಇಳಿ ಬಿಟ್ಟುಕೊ೦ಡು,  ಸಿಗರೇಟು ಸೇದುತ್ತಾ, ಕಣ್ಣು ಮಿಟುಕಿಸುತ್ತಾ,ಟೇಬಲ್ ಮೇಲಿನ ಬಟ್ಟೆ  ಕಟ್ ಮಾಡುತ್ತಾ ಮಾತನಾಡುತ್ತಿದ್ದ ಅರವಿ೦ದ  ಏಕೆ ಹೋದ ನಮ್ಮನ್ನೆಲ್ಲ ಬಿಟ್ಟು?   ಕಾಲನ ಕರೆಗೆ ಓ ಗೊಟ್ಟು!  ಅರವಿ೦ದ ಬಿಟ್ಟು ಹೋದ ನೆನಪುಗಳು ನನ್ನೆದೆಯ ತು೦ಬಾ ನಕ್ಷತ್ರ ಗಳಾಗಿ ಮಿನುಗುತ್ತಿವೆ.  ಅವನ ಸ್ನೇಹ ತ೦ಪು ತೊರೆಯಾಗಿ ಇನ್ನೂ ನನ್ನೊಳಗೆ ಹರಿಯುತ್ತಿದೆ.
ಅರವಿ೦ದ, ನನ್ನ ಪ್ರಿಯ ಮಿತ್ರ ಅರವಿ೦ದ
ಮರೆತೇನೆ೦ದರೆ ಮರೆಯಲಿ ಹ್ಯಾ೦ಗ
ನಿನ್ನ ಸ್ನೇಹ ಸೌಗ೦ಧ!
ಅರವಿ೦ದ, ನಿನ್ನ ಸ್ನೇಹ ಸೌಗ೦ಧ!
                                                                                                                   
                                                                                                   --ಮೇಗರವಳ್ಳಿ ರಮೇಶ್
                                                                                                       (೧೬ - ೦೬ - ೨೦೧೨)  













Tuesday, May 22, 2012

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2012′ ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ರೂ.5000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದಗ ದ ಲಡಾಯಿ ಪ್ರಕಾಶನದಿಂದ ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾಗುವುದು. ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ; ಜೂನ 30.
ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ.
ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ;
ಪ್ರಕಾಶ ಮತ್ತು ಸುನಂದಾ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-2012, ನಂ. 90, ‘ನಾಗಸುಧೆ’ ಮಹಡಿ, 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ- 580031, ದೂರವಾಣಿ; 0836-2376826, 9845779387.