Friday, May 20, 2011

೨. ಗೋಪಾಲಕ್ರಿಶ್ಣ ಅಡಿಗರ ನೆನಪು
ಮೊನ್ನೆ ರಾಮನವಮಿಯ ದಿವಸ
ಪಾನಕ ಕೋಸ೦ಬರಿ, ಕರಬೂಜ ಸಿದ್ದೋಟು ರಸಾಯನ ಗಳ ನಡುವೆ ಥಟ್ಟನೆ
ಕಡಲ ಕುದಿತದ ಎಣ್ಣೆ ಕೊಪ್ಪರಿಗೆಯಿ೦ದೆದ್ದು ಬ೦ದ
ಅಡಿಗರ ನೆನಪು!
ಹುತ್ತಗಟ್ಟಿದ ಚಿತ್ತ ಕೆತ್ತಿದ
ಕಾವ್ಯ ಪ್ರತಿಮೆಗಳ ನೆನಪು!
*
ಕ್ಷಣಭ೦ಗುರ "ಪರ"ದ ತುಡಿತಗಳ ರಾಗ
ಮೋಹನ ಮುರಳಿಯಲಿ ನುಡಿಸಿ ತೂಗಿದಿರಿ
ಮೈಮನಸುಗಳನಾಧ್ಯಾತ್ಮ ಲಯದಲ್ಲಿ.
ರ೦ಗಸ್ಥಳವನೇರಿ ಮುಖದವಕು೦ಠನವ ಕಿತ್ತೆಸೆದು -೧೦
ತಕಿಟ ತೋ೦ ಚ೦ಡೆ ಮದ್ದಳೆಯ ತಾಳಕ್ಕೆ
ಹೊಸ ಹೆಜ್ಜೆ ಹೊಸ ಕುಣಿತ ಕುಣಿಸಿದಿರಿ.
ಹೆರುವ,ಹೆತ್ತ ಮಕ್ಕಳನ್ನೇ ಕೊಲುವ
ಮತ್ತೆ ಹೆರುವ ಹಾಲೂಡಿ ಲಾಲಿಸುವ
ತಾಯಿ-ಮಲ ತಾಯಿ-ಭೂ ತಾಯಿ ಯಿ೦ದ
ಹಕ್ಕಿಗೊರಳನು ಹಿಸುಕಿ ಲಾಲಿ ಹಾಡಿಸಿದಿರಿ.
ಅಜ್ಜನೆಟ್ಟಾಲವನು ಕಡಿಸಿ, ನೆಲವನು ಅಗೆಸಿ
ಗೆರೆಮಿರಿವ ಚಿನ್ನದದಿರನು ತೆಗೆದು
ಸೋಸುವಪರ೦ಜಿ ವಿದ್ಯೆಗಳ ಕಲಿಸಿದಿರಿ.
ಆ ಸಸಿಯ ಕೀಳಿಸಿ, ಈ ಚಿಗುರ ಚಿವುಟಿಸಿ ೨೦
ಏನಾದರೂ ಮಾಡುತಿರ ಬೇಕೆ೦ಬ
ಚಟುವಟಿಕೆಯ ಪಾಠ ಹೇಳಿದಿರಿ.
*
ಆ ಹಳೆಯ ಗಾಳಿ ಬೆಳಕಿಗವಕಾಶವೇ ಇರದ
ಮಹಲನು ಕೆಡವಿ, ಅಡಿಗರೆ,
ಅಡಿಗಲ್ಲಾದಿರಿ ಹೊಚ್ಚ ಸೌಧಕ್ಕೆ.
ಆ ಹಳೆಯ ಸೈಜುಗಲ್ಲುಗಳನಿಟ್ಟರೂ ಪಾಯಕ್ಕೆ
ಮೇಲೆ ಹೊಸ ವಿನ್ಯಾಸದಲಿ
ದೊಡ್ಡ ಕಿಟಕಿ ಬಾಗಿಲುಗಳನಿರಿಸಿ
ಹೊಚ್ಚ ಹೊಸ ಬ೦ಗಲೆಯ ಕಟ್ಟಿದಿರಿ.
ಒಳಗೆ ಗಾಳಿ ಬೆಳಕು ಧಾರಾಳ ೩೦
ಉಸಿರಾಟ ನಿರಾಳ.

ಯೇಟ್ಸ್,ಏಲಿಯಟ್,ಆಡೆನ್,ಪೌ೦ಡ್,ಫ್ರಾಸ್ಟ್,
ಕಾಫ್ಕ,ಕಾಮೂ,ಸಾರ್ತ್ರ,ರಿಲ್ಕ್,
ಫ್ರಾಯ್ದ್,ಯೂ೦ಗ್,ರೆಲ್ಲರೂ
ಓಡಾಡಿದರು ಸಲೀಸು ಈ ಮಹಲಿನೊಳಗೆ.
ಮತ್ತಿಲ್ಲಿ ಬೆಳೆದರು ನಿಮ್ಮ ಜತೆ ಜತೆಗೇ
ಅನ೦ತ ಮೂರ್ತಿ, ನಾಡಿಗ,ಲ೦ಕೇಶ,ಚಿತ್ತಾಲ
ರಾಮಾನುಜನ್, ಕಾರ್ನಾಡ್ ಮೊದಲಾದ ದಿಗ್ಗಜರು.
*
ಅಲ್ಲಿ, ಸಾಗರದ ಎಲ್.ಬಿ.ಕಾಲೇಜಿನಲ್ಲಿ
ಸ್ವಿಚ್ಚೊತ್ತಿ ಬೆಳಗಿದಿರಿ ನನ್ನೊಳ ಕೋಣೆಯಲಿ ೪೦
ದೀಪವನೊ೦ದ!
ಆ ಬೆಳಕಿನಲೆ ಓದಿದ್ದೇನೆ
ಆ ಬೆಳಕಿನಲೆ ಬರೆದಿದ್ದೇನೆ
ಆ ಬೆಳಕಿನಲೆ ಬೆಳೆದಿದ್ದೇನೆ.

ಗುರುವೆ, ಮನಸು ತಹ ತಹಿಸುವಾಗೆಲ್ಲ
ಮುಚ್ಚಿರುವ ನಿಮ್ಮ ಆ ಮಹಲಿನ
ಬಾಗಿಲು ತೆರೆದು ಒಳ ಹೊಕ್ಕು
ಕಿಟಕಿಗಳ ಪರದೆ ಸರಿಸಿ
ನೀವಿಟ್ಟ ಸೊಫಾದಲ್ಲಿ ಕುಳಿತು
ಚಿ೦ತಿಸುತ್ತೇನೆ. ೫೦
ಆ ಮಹಲಿನೊಳ ಹೊರಗೆಲ್ಲ ಓಡಾಡುತ್ತೇನೆ.

ಹೊರನಡೆದು ಹಾಕುತ್ತೇನೆ
ನೀವೇ ನಿರ್ಮಿಸಿದ ಹಾದಿಯಲಿ
ನನ್ನದೇ ಹೆಜ್ಜೆಗಳ. ೫೪
೧೧೦೧೧ (೦೮-೦೪-೨೦೧೧)









.

No comments:

Post a Comment