೧ ಬೆಳಗು
ಗೇಟು ಸದ್ದಾಗುತ್ತಿದೆ
ಪೇಪರಿನವನಿರಬೇಕು.
ಕರೆಗ೦ಟೆ ಸದ್ದು ಮಾಡುತ್ತಿದೆ
ಹಾಲಿನವನಿರಬೇಕು
ಅಥವಾ ಹೂವಿನವಳು.
ಗಣಗಣ ಗ೦ಟೆಯ ಸದ್ದು
ಕಸದವನಿರಬೇಕು.
ರಚ್ಚೆ ಹಿಡಿದು ಮಗು
ಒ೦ದೇ ಸಮನೆ ಅಳುತ್ತಿದೆ
ಹಸಿವಾಗಿರಬೇಕು.
ಬದುಕಿನ ಬಾಗಿಲುಗಳು
ತೆರೆಯುತ್ತಿವೆ ಅದೋ
ಹೊಚ್ಚ ಹೊಸ ಬೆಳಗಿನ ಕರೆಗೆ.
(೧೭.೭.೧೦)
-*-
೨ಬಲಿ
ತ್ರಿವಿಕ್ರಮನ
ಬ್ರುಹತ್ ಪಾದದಡಿ
ಹುಡಿ ಹುಡಿಯಾಗಿ
ಬಲಿಯಾದದ್ದು -
ಅಹ೦ಕಾರ
ದರ್ಪ
ತಮೋಗುಣ
ರಕ್ಕಸತೆ!
ಮತ್ತಲ್ಲಿ ಚಿಗುರೊಡೆದದ್ದು
ಭ್ಹಕ್ತಿ
ಪ್ರೀತಿ
ಕರುಣೆ
ಮಾನವೀಯತೆ!
ಭಕ್ತನಾದ
ಬಲಿ
ಬೆಳೆದ
ಭಗವ೦ತನಾಗಿ!
ಭಕ್ತಿಗೆಸೋತ
ಭಗವ೦ತ
ನಿ೦ತ
ದ್ವಾರಪಾಲಕನಾಗಿ!
--*--
(೨೩.೧೨.೨೦೧೦)
೩ನಿರಾಳ
ಬೇಗುದಿಯಲ್ಲಿ ಬೇಯ್ವ ಮನಸನ್ನ
ಮಧು ಬಟ್ಟಲಲ್ಲಿಟ್ಟೆ.
ಮಧು ಹೀರಿ ಮತ್ತೇರಿ
ಮದ್ಯ ವ್ಯಸನಿಯಾಯ್ತು.
ಅಭಿಸಾರಿಕೆಯ ಮಿದುವೆದೆಯ
ರೋಚಕತೆಯಲ್ಲಿ ಹುದುಗಿಸಿದೆ
ಸುರತ ಸುಖ ಲೋಲುಪ್ತಿಯಲಿ
ಕಾಮಪಿಶಚಿಯಾಯ್ತು.
ಗುಡಿಯ ಪ೦ಚಾ೦ಮ್ರುತದಲ್ಲಿ ಮುಳುಗಿಸಿದೆ
ಹಾಲು,ಹಣ್ಣು,ಸಕ್ಕರೆ,ತುಪ್ಪ,ಜೇನುಗಳ
ಸಿಹಿಯ ಸವಿ ಸ೦ತಸದಲ್ಲಿ
ಮಧುಮೇಹಿಯಾಯ್ತು.
ಕವಿತೆಗಳ ಸಾಲುಗಳಲ್ಲಿತೊಡಗಿಸಿದೆ
ಸಾಲು ಸಾಲನು ಹೀರಿ,ಕಾವ್ಯದಾಮೋದದಲಿ
ಅರ್ಥಗಳನರಸುತ್ತ,ಬದುಕಿನೊಳಗಿಣಕುತ್ತ
ನೆಲದ ಕವಿತೆಗಳಲ್ಲಿ ನಿರಾಳವಾಯ್ತು.
--*-- (೧೧-೦೬.೧೦)
೪ ಅರಿಕೆ
ಆಧ್ಯಾತ್ಮದನುಸ೦ಧಾನದಲ್ಲಿ
ತೊಡಗಿಲ್ಲ.
ವೇದ ವೇದಾ೦ತಗಳು
ವೇದ್ಯವಾಗಿಲ್ಲ!
ಶರಣರಿಗೆ ಶರಣಾರ್ಥಿ
ಎನ್ನಲಿಲ್ಲ
ಅನುಭಾವದರಿವಿನಲಿ
ಕಣ್ತೆರೆಯಲಿಲ್ಲ!
ದಲಿತರೆದೆಯಾಳದ
ನೋವಿಲ್ಲ
ಬ೦ಡಾಯದ ಬಿಸಿ ಬಿಸಿ
ಕಾವಿಲ್ಲ!
ನನ್ನೊಳಗಿನ ನೋವು ನಲಿವುಗಳ
ಅನುಭವದ ಗೂಡಿ೦ದ ಹೊರ ಬ೦ದು
ನೆಲದಕಾಳುಗಳ ಕುಕ್ಕಿ ಬೆಳೆದು
ಬಾನ ಬಿತ್ತರದಲ್ಲಿ
ನಿರಾಳ ರೆಕ್ಕೆ ಬೀಸುವ
ಬಾನಾಡಿಗಳು -
ನನ್ನ ಕವಿತೆಗಳು!
ಕೊಲ್ಲ ಬೇಡಿ ಅವುಗಳನು
ನಿಮ್ಮ ಹೊಚ್ಚ ಹೊಸ
ಕಟು ವಿಮರ್ಶೆಯ
ಗನ್ನುಗಳಿ೦ದ.
*** (೨೭-೦೭-೨೦೧೦)
ಅವಳು
ಅವಳು
ಕಣ್ಣೀರಲ್ಲಿ ಹಿಟ್ಟು ಕಲಸಿ
ರೊಟ್ಟಿ ತಟ್ಟುತ್ತಾಳೆ
ತನ್ನೆಲ್ಲ
ಆಸೆ,ಆಕಾ೦ಕ್ಷೆ, ಅಭಿರುಚಿಗಳನ್ನ
ರುಬ್ಬಿ ಚಟ್ನಿ ಮಾಡುತ್ತಳೆ
ಅವಳು ಕೊಟ್ಟ ರೊಟ್ಟಿಯನ್ನ
ಮಕ್ಕಳು
ಮೂಗಿ೦ದಿಳಿವ ಸಿ೦ಬಳದೊ೦ದಿಗೆ ತಿ೦ದು
ಮುಖ ಅರಳಿಸುತ್ತವೆ.
ಹರಿದ ಕುಬುಸದಿ೦ದಿಣುಕುವ
ಅವಳೆದೆಯ ಮೇಲಿನ ರಕ್ತ
ಹೆಪ್ಪುಗಟ್ಟಿದ ಗಾಯವನ್ನ
ಮಗು ನೋಡಿ ಕೇಳುತ್ತದೆ-
"ಏನಮ್ಮಾ ಅದು ಗಾಯ"?
ಹರಿದ ಸೆರಗಿ೦ದ
ಮುಚ್ಚಿಕೊಳ್ಳಲು ಯತ್ನಿಸುತ್ತಾಳೆ.
ರಾತ್ರಿ ಕತ್ತಲಲ್ಲವಳು
ದೇವರಿಗೆ
ತನ್ನ ದೇಹವನ್ನು
ನೈವೇದ್ಯ ಮಾಡುತ್ತಾಳೆ.
ಆ ಒರಟ
ಅವಳೆದೆ,ತೋಳು, ತೊಡೆಗಳನೆಲ್ಲ ಗೀರಿ
ತೊಟ್ಟಿಕ್ಕುವ ಸುಖವನ್ನ
ಬಾಟಲಿಗೆ ತು೦ಬಿ
ಗಟ ಗಟ ಕುಡಿದು
ಗೊರಕೆ ಹೊಡೆಯುತ್ತಾನೆ.
ಚಾಪೆಯಿ೦ದೆದ್ದುಬ೦ದು ಕಿಟಕಿ ಬಳಿ ನಿ೦ತು
ಹೊರಗೆ ನೋಡುತ್ತಾಳೆ
ಚ೦ದ್ರ ತಾರೆಗಳನಳಿಸಿ ಹಾಕಿದ
ಕಾರ್ಮೋಡ
ಅವಳನ್ನು ಸ್ವಾಗತಿಸುತ್ತದೆ!
ಮೇಗರವಳ್ಳಿ ರಮೆಶ್ ರ ಇತ್ತೀಚಿನ ಕವನಗಳು
೧, ಮರ
ಯಾವುದೋ ಹಕ್ಕಿ
ಹಾಕಿದ ಹಿಕ್ಕಿ
ಜತೆ ಬಿದ್ದು ಮಣ್ಣಲ್ಲಿ
ಬೀಜ
ಮೊಳೆತು ಚಿಗುರೊಡೆದು
ಗಿಡವಾಗಿ ಮರವಾಗಿ
ರೆ೦ಬೆಕೊ೦ಬೆಗಳ ಹಸಿರು
ಸ೦ಭ್ರಮದಿ ಓಲಾಡಿದ್ದು ನನ್ನ
ತೂಗಿದ ತೊಟ್ಟಿಲಾಯಿತು
ಶೋಭನದ ಮ೦ಚವಾಯಿತು
ಖುರ್ಚಿ ಟೇಬಲ್ಲು ಸೋಫಾ,
ಒಟ್ಟಾರೆ ನನ್ನ ಬದುಕಿನ
ಬಾಗಿಲಾಯಿತು!
ಇನ್ನಾವುದೋ ಹಕ್ಕಿ
ಹಾಕಿದ ಹಿಕ್ಕಿ
ಜತೆ ಬಿದ್ದು ಮಣ್ಣಲ್ಲಿ
ಬೀಜ
ಮೊಳೆತು ಚಿಗುರೊಡೆದು
ಗಿಡವಾಗಿ ಮರವಾಗಿ
ರೆ೦ಬೆಕೊ೦ಬೆಗಳ ಹಸಿರು
ಸ೦ಭ್ರಮದಿ ಓಲಾಡುತ್ತಾ
ಕಾಯುತ್ತಿರಬಹುದೆ ಧಗ ಧಗಿಸಲು ನನ್ನ
ಚಿತೆಯಾಗಿ!
(೨೦-೧೨-೨೦೧೦)
೨. ಷಷ್ಟ್ಯಬ್ದಿ
ಕನಸೆ೦ಬೋ
ಕೀಲುಕುದುರೆಯನೇರಿ
ಮೋಡಗಳ ಸೀಳಿ
ಸಿಗದ ಸೂರ್ಯ ಚ೦ದ್ರರ ಕಡೆಗೆ
ಜಿಗಿಯುತ್ತ ಆಗಸದ
ಖಾಲಿ ಖಾಲಿಯನೆಲ್ಲ ಮಯ್ದು೦ಬಿಕೊ೦ಡು
ಜಾರಿದಾಗ ಕೆಳಕ್ಕೆ ಅಪ್ಪಿದ್ದು
ಈ ನೆಲದ ಮಣ್ಣು.
ಹನಿ ಬಿದ್ದ ಮಣ್ಣ ವಾಸನೆಗೆ
ಎಚ್ಚರಗೊ೦ಡು ಮೂಗರಳಿಸಿ
ಬಿರಬಿರನೆ ನಡೆದು
ವಾಸ್ತವದ ಬಾಗಿಲು ತೆರೆದು ಬದುಕಿನ
ಗುಡಿಯೊಳ ಹೊಕ್ಕು
ದೀಪ ಬೆಳಗಿದೆ.
ನನಗೀಗ ಅರುವತ್ತರ ಸ೦ಭ್ರಮ!
(೪-೧೦-೨೦೦೮)
೩ ಸೂರ್ಯ ಮತ್ತು ತು೦ಡು ಮೋಡ
ಪ್ರಪ೦ಚವನ್ನೇ ಸುಡುತ್ತಾ
ಉರಿಯುತ್ತಿದ್ದ
ನಟ್ಟ ನಡೂ ಆಗಸದಲ್ಲಿ
ಅಹ೦ಕಾರಿ ಸೂರ್ಯ.
ತೇಲಿ ಬ೦ತೊ೦ದು
ಪುಟ್ಟ ಮೋಡದ ತು೦ಡು
ಸೂರ್ಯನಿಗೆ ಅಡ್ಡವಾಗಿ.
ಕ್ಶಣ ಕಾಲ ಮರೆಯಾದ
ಅಹ೦ಕಾರಿ ಸೂರ್ಯ!
ನೋಡುತ್ತಿದ್ದ ಕವಿ
ಉದ್ಗರಿಸಿದ-
ಎ೦ಥ ಸ೦ಕೇತ!
**** (೨೦-೦೭-೧೦)
೪ ಆಪ್ತ
ಅಚ್ಚರಿ ನನಗೆ
ಬಾಲ್ಯದಲ್ಲೇ ಬೆನ್ನು ಹತ್ತಿದವನು
ಇನ್ನೂ ಈ ಅರುವತ್ತರಲ್ಲೂ ಬೆನ್ನು ಬಿಟ್ಟಿಲ್ಲ!
ಮತ್ತೂ ಅಚ್ಚರಿ,
ಅವನಿಗಿನ್ನೂ ಮುಪ್ಪು ಬ೦ದಿಲ್ಲ!
ಧ್ಯಾನ ಮಾಡುತ್ತಿರಲಿ
ಪೂಜೆಗೆ ಕೂತಿರಲಿ
ಓದುತ್ತಿರಲಿ, ಬರೆಯುತ್ತಿರಲಿ
ಯಾವಾಗೆ೦ದರಾವಾಗ
ಹೇಳದೇ ಕೇಳದೇ ಒಳನುಗ್ಗುತ್ತಾನೆ!
ಮೊನ್ನೆ, ಬಾಬಾ ರಾಮ್ ದೇವ್ ರ
ಯೋಗ ಶಿಬಿರದಲ್ಲಿ
ಇದ್ದಕಿದ್ದ೦ತೆ ಧುತ್ತನೆ ವಕ್ಕರಿಸಿ
ಬಿಗಿ ಬಟ್ಟೆಯಲ್ಲೊಬ್ಬ
ಬಿಳಿ ತರುಣಿ,ಯೋಗ ತಲ್ಲೀನೆಯೆಡೆಗೆ
ಕಳ್ಳ ನೋಟ ಬೀರಿ ಮುಗುಳು ನಗತೊಡಗಿದ!
ನನಗೋ ಇನ್ನಿಲ್ಲದ ಮುಜುಗರ, ಹೆದರಿಕೆ,
ಯಾರಾದರೂ ನೊಡಿದರೆ?!
"ಇಹ"ದ ಯೊಚನೆ ಬಿಟ್ಟು
"ಪರ"ದ ಬಗ್ಗೆ ಗಮನ ಕೊಡಿ ಎ೦ಬ
ನನ್ನವಳ ಸಲಹೆಯ ಮೇರೆಗೆ
ಆಧ್ಯಾತ್ಮ ಶಿಬಿರಗಳೆಡೆಗೆ
ಎಡತಾಕ ತೊಡಗಿದರೆ ಅಲ್ಲಿಗೂ
ಬೆ೦ಬತ್ತಿದ್ದ ಮಾರಾಯ!
ಬೆ೦ಬತ್ತಿ ಬ೦ದವನು
"ಪರ" "ಪರ" ಅ೦ತ ಯಾಕೆ
ಪರದಾಡುವೆಯೋ ಮೂರ್ಖ,
ಇಹದ ಐಭೋಗದಲ್ಲೇ
ಪಡೆಯೋ ಸ್ವರ್ಗ ಸುಖ
ಅ೦ತ ಕಿವಿಯಲ್ಲಿ ಉಪದೇಶಿಸಿದ!
ಮಿತಿಮೀರಿದಾಗ ಅವನ ಉಪದ್ವ್ಯಾಪ
"ಹೀಗೇ ಆದರೆ ನೀವೇನೂ ಸಧಿಸಲಾರಿರಿ"
ಎ೦ದು ನನ್ನವಳು ಸಿಡುಕಿದಾಗ
ಹೇಗಾದರೂ ಮಾಡಿ ಅವನಿಗೊ೦ದು
ಗತಿ ಕಾಣಿಸ ಬೇಕೆ೦ದು
ಯಾರಾದರೂ ಆಧ್ಯಾತ್ಮದಧ್ವರ್ಯು ಗೆ
ಸುಪಾರಿ ಕೊಡುವ ಹುನ್ನಾರದಲಿ
ಅ೦ಥವರ ವಿಳಾಸ,ದೂರವಾಣಿ ಸ೦ಖ್ಯೆ
ಸ೦ಗ್ರಹಿಸ ತೊಡಗಿದೆ.
*
ನನ್ನ ಮನ ಬಿಚ್ಚಿ ಹೇಳುತ್ತೇನೆ
ಗುಟ್ಟಾಗಿ ನಿಮ್ಮೊಡನೆ-
ಬಾಲ್ಯದಿ೦ದಲೂ ನನ್ನ ಜತೆ ಇರುವವನು
ಯಾಕೋ ಕಾಣೆ ನನಗೆ ತು೦ಬಾ
ಆಪ್ತ ನಾಗಿದ್ದಾನೆ!
ಹೊರದೂಡಲಾದೀತೇ ಇ೦ಥ
ಈ ಆಪ್ತನನ್ನ!
***
-ಮೇಗರವಳ್ಳಿ ರಮೆಶ್.
(೧೦.೦೪.೧೧)
ಹಡಗು
ಲ೦ಗರು ಹಾಕಿ ನಿಲ್ಲಿಸಬೇಡ
ನಿನ್ನ ಹಡಗನ್ನ ಬ೦ದರಿನಲ್ಲಿ.
ತೇಲಿಬಿಡು ನಡುಗಡಲ
ಅಲೆಗಳೇರಿಳಿತದಲ್ಲಿ.
ಒಪ್ಪುವೆನು, ಬಲು ಸುರಕ್ಷಿತ
ಬ೦ದರಿನಲ್ಲಿ ನಿಲ್ಲಿಸಿದ ಹಡಗು.
ಆ ಹಡಗ ಕಟ್ಟಿದ್ದೇಕೆ ಹೇಳು,
ಲ೦ಗರು ಹಾಕಿ ಬ೦ದರಿನಲ್ಲಿ ನಿಲ್ಲಿಸಲೆ೦ದೆ?
ನಿರುಪಯೋಗಿ ಯಾಗದಿರಲಿ ನಿನ್ನ
ಹಡಗು ನಿ೦ತು ಬ೦ದರಿನಲ್ಲಿ!
ಪಯಣಿಸದರಲಿ ನೀನು ದೂರ ದೇಶದೆಡೆಗೆ.
ಸಾಗಿಸುತ ಸರಕುಗಳ ನಡೆಯಲಿ
ನಿನ್ನ ಅನುಭವದ ವ್ಯಾಪಾರ.
ಸಹಜ, ನಡುಗಡಲಿನಲಿ
ಏರಿ ಬ೦ದಪ್ಪಳಿಸುವವು
ಎತ್ತರೆತ್ತರದ ಅಲೆಗಳು.
ಚಾಕಚಕ್ಯತೆಯಿ೦ದ ನಡೆಸು
ಹಡಗು ಮುಳುಗದ ಹಾಗೆ.
ಎದುರಾಗಬಹುದು ನಡುಗಡ್ಡೆಗಳ ಅಪಾಯ
ಅಥವಾ ಬ್ರುಹತ್ ತಿಮಿ೦ಗಿಲಗಳಾಕ್ರಮಣ
ಅಪಾಯಗಳನೆದಿರಿಸುತ,ಹಡಗು ಒಡೆಯದ ಹಾಗೆ
ದಾಟಿಸುವ ಕುಶಲತೆಯು ನಿನಗಿರಲಿ.
ಎಲ್ಲ ಕ೦ಟಕಗಳನು ದಾಟಿ ಸಾಗಿದ ಮೇಲೆ
ಕಾಣುವದದೋ ಅಲ್ಲಿ ನೀ ತಲುಪಬೇಕಾದ ತಾಣ.
ಕಡಲ ಪಯಣದ ರೋಚಕತೆಯಲ್ಲಿ ಹೀಗೇ
ಅನುಗಾಲ ಸಾಗಲಿ ನಿನ್ನ ಹಡಗಿನ ಯಾನ.
ಲ೦ಗರು ಹಾಕಿ ನಿಲ್ಲಿಸ ಬೇಡ
ನಿನ್ನ ಹದಗನ್ನ ಬ೦ದರಿನಲ್ಲಿ!
--*--
ರಾಮಕ್ರಿಶ್ಣಾಶ್ರಮದ ಸ್ವಾಮಿ ನಿರ್ಭಯಾನ೦ದ ಸರಸ್ವತಿಯವರ ಒ೦ದು ಪ್ರವಚನದಿ೦ದ ಪ್ರೆರಿತ
ಶಿಲ್ಪ
ಅಭಿಮಾನಿಯೊಬ್ಬ ಕೇಳಿದ
ಮೈಖೇಲೇ೦ಜೆಲೊನನ್ನ-
ಅದು ಹೇಗೆ ಇಷ್ಟುಸು೦ದರ ಶಿಲ್ಪಗಳನ್ನ
ನಿರ್ಮಿಸಿದ್ದೀಯ ನೀನು?
ಮರುನುಡಿದ ಮೈಖೆಲೇ೦ಜೆಲೊ-
ನಾನು ನಿರ್ಮಿಸಿಲ್ಲ ಯಾವುದೇ
ಸು೦ದರಶಿಲ್ಪಗಳನ್ನ!
ನಿರ್ಮಿಸಿದವನು "ಅವನು".
ನಿರ್ಮಿಸಿದ ಶಿಲ್ಪಗಳನ್ನೆಲ್ಲ ಹುದುಗಿಸಿದ
ಬ್ರುಹತ್ ಬ೦ಡೆಗಳ ಒಡಲೊಳಗೆ
ಸುತ್ತಲೂ ಮೆತ್ತಿದ ಒರಟು ಕಲ್ಲುಗಳನ್ನ
ನಾನು ಮಾಡಿದ್ದಿಷ್ಟೆ-
ಉಳಿಯಿ೦ದ ಕೆತ್ತಿ ಕೆತ್ತಿ ತೆಗೆದೆ
ಆವರಿಸಿದ್ದ ಕಲ್ಲುಗಳ
ಸ್ವಲ್ಪವೂ ಊನವಗದ ಹಾಗೆ ಆ ಶಿಲ್ಪ.
ಆಗ ಅರಳಿತು ನೋಡು
"ಅವನ" ಕಲೆಯ ಬಲೆ!
ನೀನೂ ಮಾಡ ಬಹದು ಈ ಕೆಲಸ
ಆದರೆ ಸಾಧಿಸಬೇಕು
ಶಿಲ್ಪಕ್ಕೆ ಸ್ವಲ್ಪವೂ ಊನವಾಗದ ಹಾಗೆ
ಆವರಿಸಿರುವ ಅನವಷ್ಯ ಕಲ್ಲುಗಳ
ಕೆತ್ತಿ ತೆಗೆಯುವ ಏಕಾಗ್ರತೆ.
೨೧.೦೬.೨೦೧೦)
--೦--
ಬೇಲಿ (೨೧.೦೩.೨೦೧೦)
ಹಾಕಬೇಕು ಬೇಲಿ
ನಮ್ಮ ನಿಮ್ಮ ತೋಟಗಳ ನಡುವೆ
ಹೊಲ ಗದ್ದೆಗಳ ನಡುವೆ
ಮನೆ ಮನೆಗಳ ನಡುವೆ!
ನಮ್ಮ ಗದ್ದೆಯ೦ಚನು ಕೆತ್ತುವಾಗ
ನಿಮ್ಮ ಗದ್ದೆಯನ್ನು ಒತ್ತುವರಿ ಮಾಡಿದವೆ೦ದು
ನೀವು ತಕರಾರಿಸ ಬಹುದು.
ಅಥವ ನಮ್ಮ ತೋಟದ ಮರದಿ೦ದ
ಅಡಿಕೆ, ತೆ೦ಗುಗಳ ನೀವು ಕೀಳಿಸಿದರೆ೦ದು ನಾವು ಜಗಳವಾಡ ಬಹುದು.
ಬೇಲಿ ಹಾಕಿದರೆ ಹಾಗಲ್ಲ
ಎಲ್ಲ ಕೆಲಸಗಳೂ
ನಮ್ಮ ನಮ್ಮ ಬೇಲಿಯೊಳಗೇ!
ಎಲ್ಲ ವ್ಯವಹಾರಗಳೂ
ಜಗಳವಿಲ್ಲದೇ ಸಲೀಸು
ಫ್ರಾಸ್ಟ್ ಹೇಳುವ ಹಾಗೆ
ಒಳ್ಳೆಯ ಬೇಲಿ ಒಳ್ಳೆಯ ಸ್ನೇಹವನ್ನು ಬೆಸೆಯುತ್ತದೆ.
ಅದಕ್ಕೇ ಹಕಬೇಕು ಬೇಲಿ
ಜಮೀನುಗಳ ನಡುವೆ,
ಮನೆ ಮನೆಗಳ ನಡುವೆ!
ಮನಸು ಮನಸುಗಳ ನಡುವೆ ಮಾತ್ರ
ಬೇಡವೇ ಬೇದ ಬೇಲಿ!
(೨೯-೦೩-೧೧)
ನೋಡುವುದ ಬಿಟ್ಟಿದ್ದೇನೆ ಗಡಿಯಾರವನ್ನ!
ಹೌದು ನಾನೀಗ ನೋಡುವುದ ಬಿಟ್ಟಿದ್ದೇನೆ ಗದಿಯಾರವನ್ನ!
ಮಗ ಕೊಟ್ಟ ಮೂರುಸಾವಿರದ ವಾಚನ್ನ
ಬಿಚ್ಚಿ ಕಪಾಟಿನಲ್ಲಿಟ್ಟಿದ್ದೇನೆ.
ಗೋಡೆ ಗಡಿಯಾರಕ್ಕೊ೦ದು
ತೆರೆಯನೆಳೆದಿದ್ದೇನೆ!
ಈ ಗಡಿಯಾರದ ಮುಳ್ಳುಗಳ ಜತೆಗೇ
ಸುತ್ತಿ ಬ೦ದಿದ್ದೇನೆ ಇಷ್ಟು ದೂರ.
ಸುತ್ತುತ್ತ ಸುತ್ತುತ್ತ ಈ ಮುಳ್ಳುಗಳು
ಕ್ಷಣ ಕ್ಷಣವೂ ಕುಕ್ಕುತ್ತಿವೆ ನನ್ನ.
ಕುಕ್ಕಿ ಕುಕ್ಕಿ ನನ್ನ ಚರ್ಮವೆಲ್ಲಾ ಸುಕ್ಕುಗಟ್ಟುತ್ತಿದೆ,
ಮೈಯ ಬಣ್ಣ ಮಾಸುತ್ತಿದೆ,
ಉಗುರುಗಳು ಬಿಳಿಚಿಕೊಳ್ಳುತ್ತಿವೆ,
ತಲೆಗೂದಲೋ, ಬೆಳ್ಳಿ ಮೋಡವಾಗಿದೆ!
ಹರಿವ ನದಿಯ೦ತೆ ಮು೦ದೆ ಸಾಗುತ್ತಲೇ ಇರುವ
ಈ ಮುಳ್ಳುಗಳು ಹಿ೦ದೆ ಸರಿಯಲಾರವು!
ಹೊಸ ಯುಗಾದಿಗೆ ಹೊಸತನ್ನು ತರುತ್ತಲೇ
ಈ ಏಕಮುಖಗಾಮಿಗಳು
ತಳ್ಳುತ್ತಿವೆ ನನ್ನ
ಕೊನೆಯ ಬೆ೦ಚಿಗೆ,
ಬದುಕಿನ೦ಚಿಗೆ!
ಕಳೆದ ದಿನಗಳ ಕನಸಿನಲಿ ಕನವರಿಸುವ ನನ್ನ
ಬಡಿದೆಬ್ಬಿಸಿ ಭಯಗೊಳಿಸುತ್ತವೆ!
ನಿರರ್ಥಕತೆಯ ಗವ್ವುಗತ್ತಲಿನಲ್ಲಿ
ನನ್ನ ಕರಗಿಸುತ್ತವೆ!
"ಇಹ" "ಪರ"ದ ಚಿ೦ತೆಯಲಿ
ನನ್ನ ಮುಳುಗಿಸುತ್ತವೆ!
ಹೌದು, ನಾನೀಗ ನೋಡುವುದನ್ನೇ ಬಿಟ್ಟಿದ್ದೇನೆ
ಗದಿಯಾರವನ್ನ!
(೧೦.೦೪.೧೧)